ಕೇಶಾಲಂಕಾರ

ಕೂದಲನ್ನು ಅಭಿರುಚಿಗೆ ತಕ್ಕಂತೆ ಬೆಳೆಸಿಕೊಳ್ಳುವುದು. ಕತ್ತರಿಸಿಕೊಳ್ಳುವುದು, ಬಾಚುವುದು, ಹೆಣೆಯುವುದು ಕಟ್ಟುವುದು ಮೊದಲಾದ ಎಲ್ಲ ವಿಷಯಗಳನ್ನೂ ಕೇಶಾಲಂಕಾರ ಒಳಗೊಳ್ಳುತ್ತದೆ. ಕೇಶದ ಅಲಂಕರಣ ಹೆಂಗಸರಿಗೆ ಹೇಗೋ ಹಾಗೆ ಗಂಡಸರಿಗೂ ಸಹಜವಾದುದೇ. ಬಹು ಹಿಂದಿನಿಂದಲೂ ಮನುಷ್ಯ ಇದಕ್ಕೆ ಗಮನ ಕೊಡುತ್ತ ಬಂದಿದ್ದಾನೆನ್ನಲು ದಾಖಲೆಗಳಿವೆ. ಆದಿಮಾನವ ಮೊದಲು ಕಲ್ಲಿನಾಯುಧಗಳಿಂದಲೂ ಅನಂತರ ಹರಿತವಾದ ಲೋಹದ ಆಯುಧಗಳಿಂದಲೂ ತನ್ನ ಕೂದಲನ್ನು ಕತ್ತರಿಸಿಕೊಳ್ಳುತ್ತಿದ್ದ. ಮೊದಮೊದಲು ಕನ್ನಡಿಯ ಉಪಯೋಗ ಅವನಿಗೆ ತಿಳಿದಿರಲಿಲ್ಲ. ಬಹುಶಃ ಒಬ್ಬ ಮತ್ತೊಬ್ಬನ ಕೂದಲನ್ನು ಕತ್ತರಿಸುತ್ತಿದ್ದಿರಬಹುದು. ಇಲ್ಲವೆ ತನ್ನ ಕೂದಲನ್ನು ಆತ ತಾನೇ ಕತ್ತರಿಸಿ ಕೊಳ್ಳುತ್ತಿದ್ದಿರಬಹುದು. ಆಗ ಆತ ಅಲಂಕರಣಕ್ಕಿಂತ ಅನುಕೂಲಕ್ಕೆ ಹೆಚ್ಚಿನ ಗಮನ ಕೊಡುತ್ತಿದ್ದನೆಂಬ ಮಾತೂ ನಿಜ. ಕ್ರಮೇಣ ನಿಂತ ತಿಳಿಯಾದ ನೀರನ್ನು ಆತ ಕನ್ನಡಿಯಾಗಿ ಬಳಸಿರಬೇಕು. ಅನಂತರ ಮೆರಗು ಕೊಟ್ಟ ಲೋಹದ ತಗಡುಗಳೇ ಅವನ ಕನ್ನಡಿಗಳಾದುವು. ಹೀಗೆ ಶತಶತಮಾನಗಳ ಅಭ್ಯಾಸ. ಪ್ರಯೋಗಗಳಿಂದ ಮಾನವ ತನ್ನ ಕೇಶಾಲಂಕರಣ ಕೌಶಲವನ್ನು ಬೆಳೆಸಿಕೊಂಡಿದ್ದಾನೆ.

ಕೇಶದ ಅಗತ್ಯ ಕಾಲಾನುಕಾಲಕ್ಕೆ ವ್ಯತ್ಯಾಸವಾಗುತ್ತ ಬಂದಿದೆ. ಮೂಲತಃ ದೇಹದ ಪ್ರಮುಖ ಭಾಗಗಳನ್ನು ಬೆಚ್ಚಗಿಟ್ಟು ಕಾಪಾಡುವುದು ಕೂದಲಿನ ಉದ್ದೇಶ. ಸಾಮಾಜಿಕ, ಧಾರ್ಮಿಕ ಹಾಗೂ ಅಲಂಕರಣ ದೃಷ್ಟಿಯಿಂದ ಮಾನವ ತಲೆಗೂದಲನ್ನು ಬೆಳೆಸಿದ್ದುಂಟು; ಪೂರ್ಣ ತೆಗೆಸಿದ್ದುಂಟು. ಸ್ವಲ್ಪ ಉಳಿಸಿಕೊಂಡು ಉಳಿದುದೆಲ್ಲವನ್ನೂ ತೆಗೆಸಿದ್ದುಂಟು. ಗಡ್ಡಮೀಸೆಗಳನ್ನೂ ಅಷ್ಟೆ. ದೇವರ ಹರಕೆಗಾಗಿ ಮಾಡಿಕೊಡುವುದನ್ನು ನೋಡಿದರೆ ಮಾನವನಿಗೆ ತಲೆಗೂದಲು ಅದೆಷ್ಟು ಪ್ರಿಯ ಎಂಬ ವಿಷಯ ಗೊತ್ತಾಗುತ್ತದೆ. ಬಹುಕಾಲ ಧಾರ್ಮಿಕ ಕಟ್ಟಳೆಗಳೇ ಅಂದಂದಿನ ಅಲಂಕರಣಕ್ಕೆ ಮಾದರಿ ಹಾಕಿ ಕೊಟ್ಟವು. ಇಂದಿಗೂ ಅವೇ ಅನೇಕ ಕಡೆ ನಿರ್ಣಾಯಕ ಮಾದರಿಗಳನ್ನು ಸೃಷ್ಟಿಸುತ್ತಿವೆ. ಬರಬರುತ್ತ ಸಾಮಾಜಿಕ ವ್ಯವಸ್ಥೆ ಬದಲಾದಂತೆಲ್ಲ ಅಲಂಕರಣ ಪದ್ಧತಿ ವೈಯಕ್ತಿಕ ಅಭಿರುಚಿಗೆ ತಕ್ಕಂತೆ ವೈವಿಧ್ಯಪೂರ್ಣವಾಗಿ ಬೆಳೆಯುತ್ತಿದೆ. ವ್ಯಕ್ತಿತ್ವಕ್ಕೆ, ಮುಖ್ಯವಾಗಿ ಮುಖದ ಅಂದಚಂದಕ್ಕೆ ಒಪ್ಪುವಂತೆ ತಲೆಗೂದಲನ್ನು ತಿದ್ದುವ ಕಲೆ ಈಚೆಗೆ ವಿಫುಲವಾಗಿ ಬೆಳೆದಿದೆ. ಇದಕ್ಕಾಗಿಯೇ ಏರ್ಪಟ್ಟ ಅಲಂಕರಣ ಗೃಹಗಳಿವೆ. ಉದಾಹರಣೆಗೆ ಬೆಂಗಳೂರಿನ ಅಶೋಕ ಹೋಟಲನ್ನು ಹೆಸರಿಸಬಹುದು. ಅಲ್ಲಿ ಇದಕ್ಕಾಗಿ ಏರ್ಪಟ್ಟ ಸಂಕೀರ್ಣ ವಿಭಾಗವಿದೆ. 
ಕೇಶಪೋಷಣೆ, ಅಭಿವೃದ್ಧಿ

ಕೂದಲು ನೀಳವಾಗಿ, ನುಣುಪಾಗಿ, ಹೊಳಪಾಗಿ ಅಲೆಅಲೆಯಾಗಿ ಇರಬೇಕೆಂಬುದು ಎಲ್ಲರ ಆದರ್ಶ. ಇಂಥ ಕೂದಲನ್ನು ವಿಪುಲವಾಗಿ ಬೆಳೆಸಿಕೊಳ್ಳಲು ಮನುಷ್ಯ ಅನೇಕ ಸಾಧನಗಳನ್ನು ಕಂಡುಹಿಡಿದಿದ್ದಾನೆ. ಪೂರ್ವ ರಾಷ್ಟ್ರಗಳವರೆಲ್ಲ ಸಾಮಾನ್ಯವಾಗಿ ಕರಿಗೂದಲನ್ನು ಬಯಸುತ್ತಾರೆ.  ಆದರೆ ಪಾಶ್ಚಾತ್ಯರು ಕರಿಗೂದಲನ್ನು ಮೆಚ್ಚುವಂತೆ ಬಂಗಾರದ ಬಣ್ಣದ ಕೂದಲನ್ನೂ ಮೆಚ್ಚುತ್ತಾರೆ. ಪೂರ್ವ ರಾಷ್ಟ್ರಗಳಲ್ಲಿ ಇಂದಿಗೂ ಜಡೆ, ಮುಡಿ ಹೆಚ್ಚು. ಪಾಶ್ಚಾತ್ಯರಲ್ಲಿ ಈ ಶೈಲಿಗಳಿವೆಯಾದರೂ ಬಹುತೇಕ ಮೊಟಕು ಕೂದಲಿನ ಅಲಂಕರಣ(ಬಾಬ್‍ಕಟ್) ಹೆಚ್ಚು. ಈಚೆಗೆ ಪೂರ್ವ ರಾಷ್ಟ್ರಗಳಲ್ಲಿನ ದೊಡ್ಡ ಪಟ್ಟಣಗಳಲ್ಲಿ ಈ ಬಗೆಯ ಕೇಶಾಲಂಕರಣ ಜನಪ್ರಿಯವಾಗುತ್ತಿದೆ. ಇತ್ತೀಚಿನ ಹಿಪ್ಪಿ ಕೇಶಶೈಲಿಯನ್ನು ಅಲಂಕರಣವೆನ್ನಲಾಗುವುದಿಲ್ಲ. ಏಕೆಂದರೆ ಈ ಶೈಲಿ ಪ್ರಾಕೃತ ಮಾದರಿಯದು. ಸ್ವೇಚ್ಛವಾದುದು. ಅಲಂಕರಣವೆಂದೊಡನೆ ಕೃತಕತೆ ಬರುತ್ತದಾಗಿ ಆ ಮಾತನ್ನು ಇಲ್ಲಿ ಬಳಸಲಾಗದು.

	ಕಾಲಿಕ ಅಭ್ಯಂಜನ, ನಿತ್ಯಬಾಚುವುದು-ಮೊದಲಾದ ಕ್ರಿಯೆಗಳಿಂದ ತಲೆಯಲ್ಲಿ ಬೆವರು ಸೇರುವುದಿಲ್ಲ. ಹೇನು ಸೀರುಗಳು ಮನೆಮಾಡುವುದಿಲ್ಲ. ಹುರುಪೆ ಏಳುವುದಿಲ್ಲ. ತಲೆಗೆ ಸಮೃದ್ಧವಾಗಿ ಎಣ್ಣೆ ತೀಡಿ ಬಾಚುವುದರಿಂದ ಕೂದಲು ಹೊಳಪಾಗುತ್ತದಲ್ಲದೆ ನುಣುಪೂ ಅಲೆಯಲೆಯೂ ಆಗುತ್ತದೆ. ಅಭ್ಯಂಜನಕ್ಕೂ ಅನಂತರದ ಲೇಪನಕ್ಕೂ ವಾಸನೆಯ ಎಣ್ಣೆಯನ್ನು ಬಳಸುವ ವಾಡಿಕೆ ಹಿಂದಿನಿಂದ ಬಂದಿದೆ. ಅದಕ್ಕಾಗಿ ಹರಳೆಣ್ಣೆ ಕೊಬ್ಬರಿ ಎಣ್ಣೆಗಳನ್ನು ಶುದ್ಧೀಕರಿಸಿ ಗುಲಾಬಿ, ಮಲ್ಲಿಗೆ, ಸಂಪಿಗೆ, ಪಾರಿಜಾತ, ಕಮಲ, ಲ್ಯಾವೆಂಡರ್ ಮೊದಲಾದ ವಾಸನೆ ಕಟ್ಟುತ್ತಾರೆ. ಈಚೆಗೆ ಕೇಶಪೋಷಣೆಗೆ ಅಗತ್ಯವಾದ ಅನೇಕ ದ್ರವ್ಯಗಳನ್ನು ಎಣ್ಣೆಗಳಿಗೆ ಸೇರಿಸಲಾಗುತ್ತಿದೆ. ತಲೆಗೆ ಹಾಕಿದ ಎಣ್ಣೆಯನ್ನು ತೆಗೆಯಲು ಸೀಗೆಯ ಪುಡಿ, ಅಂಟುವಾಳ, ಚುಜ್ಜಲು, ಕಡಲೆ ಹಿಟ್ಟು, ಹೆಸರುಹಿಟ್ಟನ್ನು ಬಳಸುವುದು ಸಾಮಾನ್ಯವಾದರೂ ಈಚೆಗೆ ಅನೇಕ ಷ್ಯಾಂಪೂಗಳನ್ನು ಈ ಕೆಲಸಕ್ಕಾಗಿ ತಯಾರಿಸಿದ್ದಾರೆ. ಏನೇ ಆಗಲಿ ತಲೆಗೆ ಸೋಪು ಹಾಕಬಾರದೆಂದು ತಜ್ಞರ ಅಭಿಪ್ರಾಯ. ಭಾರತೀಯರಲ್ಲಿ ಎಣ್ಣೆ ನೀರು ಹಾಕಿಕೊಂಡು ಆದಮೇಲೆ ಒರಸಿದ ತಲೆಗೂದಲನ್ನು ಸಾಂಬ್ರಾಣಿ ಹೊಗೆಯಲ್ಲಿ ಕಾಯಿಸುವ ರೂಢಿ ಇದೆ. ಇದರಿಂದ ಕ್ರಿಮಿನಾಶವಾಗುವುದಲ್ಲದೆ ಕೂದಲು ಬೇಗ ಒಣಗಿ ಬಹುಕಾಲ ಗಮಗಮಿಸುತ್ತಿರುತ್ತದೆ. ಈ ದೃಷ್ಟಿಯಿಂದ ತಲೆಗೆ ಹೂಮುಡಿಯುವುದು, ಅಲಂಕರಣ ಮಾತ್ರವಲ್ಲದೆ ಕೂದಲಿಗೆ ವಾಸನೆಕಟ್ಟುವ ಕ್ರಮವೂ ಆಗುತ್ತದೆ.

	ತಲೆಗೂದಲಿಗೆ ಬೆಣ್ಣೆ, ಹಾಲು, ಹಾಲಿನ ಕೆನೆ, ಮೊಸರು-ಇವನ್ನು ಹಾಕಿ ಚೆನ್ನಾಗಿ ತಿಕ್ಕಿ ಸ್ನಾನಮಾಡಿದಲ್ಲಿ ಕೂದಲು ನುಣುಪೂ ಹೊಳಪೂ ಆಗುತ್ತದೆ ಎನ್ನಲಾಗಿದೆ. ಈ ಕ್ರಮ ಹಿಂದೆ ಭಾರತದಲ್ಲಿ ಬಳಕೆಯಲ್ಲಿತ್ತು. ಇಂದಿಗೂ ರಷ್ಯದ ಕೆಲವು ಭಾಗಗಳಲ್ಲಿದು ಪ್ರಚಲಿತವಿದೆ. ಇದರಿಂದ ತಲೆಯಲ್ಲಿ ಹುರುಪೆ ಏಳದು, ತೀಡುವುದರಿಂದ ಕೂದಲು ಬೇರುಗಳು ಗಟ್ಟಿಯಾಗುತ್ತವಾಗಿ ಬೇಗ ಕೂದಲು ಉದುರದು. ಚರ್ಮದ ಮುಖಾಂತರ ಕೆಲವು ಪೋಷಕ ದ್ರವ್ಯಗಳು ಕೂದಲ ಮೂಲವನ್ನು ಸೇರುತ್ತವಾಗಿ ಕೂದಲು ಹೊರವಾಗಿ ಬೆಳೆಯುತ್ತದೆ.

	ಅಗತ್ಯಕ್ಕಿಂತ ತಲೆಗೂದಲು ಕಡಿಮೆಯಾದಾಗ ಕೊರೆ ತುಂಬಲು ಕೃತಕಸಾಧನಗಳನ್ನು ಬಳಸುತ್ತಾರೆ. ಚವುರಿ, ಕುಚ್ಚು, ಸಿಂಬಿ ಮೊದಲಾದವು ಕೆಲವು ಮುಖ್ಯ ಸಾಧನಗಳು, ತಲೆಯಲ್ಲಿ ಕೂದಲೇ ಇಲ್ಲದವರು ಟೋಫನ್‍ಗಳನ್ನು ಬಳಸುತ್ತಾರೆ. ಇಂಥ ಉಪಕರಣಗಳನ್ನು ತಯಾರಿಸುವ ಮಾರುವ ಉದ್ಯಮ ಈಚೆಗೆ ಹೇರಳವಾಗಿ ಬೆಳೆದಿದೆ.
ಬಣ್ಣ ಕಟ್ಟುವುದು

ವಯಸ್ಸಾದಂತೆಲ್ಲ ಕೂದಲು ಬೆಳ್ಳಗಾಗುವುದು ಸಹಜ. ಕೆಲವರಿಗೆ ವಂಶಪಾರಂಪರ್ಯದಿಂದ ಬಂದ ಗುಣಗಳಿಂದಾಗಿ ಅಕಾಲದಲ್ಲಿ ಜರೆ ಪ್ರಾಪ್ತವಾಗುವುದುಂಟು. ಹಾಗಾದಾಗ ಬಿಳಿಯ ಕೂದಲನ್ನು ಬಣ್ಣ ಹಾಕುವುದರ ಮೂಲಕ ಕಪ್ಪಗಾಗಿಸಿಕೊಳ್ಳಲು ಮನುಷ್ಯ ಪ್ರಯತ್ನಿಸುತ್ತ ಬಂದಿದ್ದಾನೆ. ಒಣ ಕೊಬ್ಬರಿಯನ್ನು ಕರ್ರಗೆ ಸುಟ್ಟು ಕೊಬ್ಬರಿ ಎಣ್ಣೆಯಲ್ಲಿ ಕಲಸಿ ಲೇಪಿಸುತ್ತ ಬಂದರೆ ಕೂದಲು ಕಪ್ಪಾಗುತ್ತದೆಂದು ಹೇಳಲಾಗಿದೆ. ಇತ್ತೀಚೆಗೆ ಈ ಬಗ್ಗೆ ತಯಾರಾದ ಅನೇಕ ಸಿದ್ಧೌಷಧಗಳು ಮಾರುಕಟ್ಟೆಗೆ ಬಂದಿವೆ.

ಕೇಶನಾಶನ

ಅಗತ್ಯವಾದಷ್ಟು ಕೂದಲನ್ನು ಉಳಿಸಿ ಬೆಳೆಸಿಕೊಳ್ಳುವಂತೆ ಅನಗತ್ಯವೆನಿಸಿದವನ್ನು ನಿರ್ಮೂಲಮಾಡುವುದೂ ಅಲಂಕರಣದ ಒಂದು ಮುಖ ಭಾಗ. ಕಂಕುಳು, ಕಿವಿ, ಕೆಲವೊಮ್ಮೆ ಮೂಗಿನ ದಿಂಡು ಮೊದಲಾದೆಡೆ ಬೆಳೆವ ಕೂದಲು, ಅತಿಯಾಗಿ ಬೆಳೆಯುವ ಹುಬ್ಬುಗೂದಲು, ಕೈಕಾಲುಗಳ ಮೇಲಿನ ಕೂದಲ ಬೆಳವಣಿಗೆ-ಇವನ್ನೂ ಅನೇಕ ವೇಳೆ ಹೆಂಗಸಿನ ಮೂಗಿನ ಕೆಳಗೆ ಮೇಲುದುಟಿಯ ಮೇಲೆ ಕಾಣುವ ರೋಮಗಳನ್ನೂ ತೆಗೆದುಹಾಕಬೇಕಾಗುತ್ತದೆ. ಈ ಬಗ್ಗೆ ಅನೇಕ ಪ್ರಯೋಗಗಳನ್ನು ನಡೆಸಲಾಗಿದೆ. ವಿದ್ಯುಚ್ಛಕ್ತಿಯನ್ನು ಬಳಸಿ ಕೇಶ ಲಂಛನ ಮಾಡುವ ವಿಧಾನ ಈಚೆಗೆ ಜನಪ್ರಿಯವಾಗುತ್ತದೆ. 
(ನೋಡಿ- ಅಂಗರಾಗಗಳು,-ಅಂಗರಾಗಶಾಸ್ತ್ರ)
(ನೋಡಿ- ಕೇಶನಾಶಕ)
ಅಲಂಕರಣ ವಿಧಾನ-ಕನ್ನಡಿಗರಲ್ಲಿ

ಪ್ರಾಚೀನ ಕಾಲದಿಂದ ಕನ್ನಡ ಮಹಿಳೆಯರು ಕೇಶಾಲಂಕಾರ ಕಲೆಯಲ್ಲಿ ನಿಪುಣರೆನಿಸಿಕೊಂಡಿದ್ದಾರೆ. ಪ್ರಾಚೀನ ಕರ್ನಾಟಕದ ಶಿಲ್ಪಕಲೆಯಲ್ಲಿ ಮೂಡಿಬಂದ ಮಹಿಳೆಯರ ಅಲಂಕಾರಗಳನ್ನು ಗಮನಿಸಿದರೆ, ಆ ಕಾಲದ ಕನ್ನಡ ಕಾವ್ಯಗಳನ್ನವಲೋಕಿಸಿದರೆ ಇದು ವೇದ್ಯವಾಗುವುದು. ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ದೊರೆಯುವ ಜಡೆಮುಡಿಗಳ ವರ್ಣನೆಯನ್ನು, ಶಿಲ್ಪದ ಮೂರ್ತಿಮಂತ ರೂಪದೊಂದಿಗೆ ಸಮನ್ವಯಗೊಳಿಸಿ ನೋಡಿದಾಗ ಆ ಕಾಲದ ಕೇಶಾಲಂಕಾರದ ವೈವಿಧ್ಯಮಯ ಚಿತ್ರ ನಮಗೆ ಕಂಡುಬರುತ್ತದೆ.

	`ಕುಡಿವುಗರಿಂದಳಲ್ಮುಡಿಯ ಗಂಟು ಸಡಲ್ಚಿಸಿ ಗಂಧತೈಲಮಂ ಕುಡಿತೆಯೊಳಾಂತು ನೆತ್ತಿಯೊಳಗೊತ್ತಿ ಬಿದಿರ್ಚುತೆ ಕೇಶಪಾಶಮಂ'

	`ಸಹಜ ದಿವ್ಯಸುಗಂಧದ ಕೇಶಪಾಶಮಂ ಮೃಗಗಂಧಿ ಪೂಸಿದಳುಪಾಸಿತ ಚಂಪಕ ಗಂಧತೈಲಮಂ'/
ಇತ್ಯಾದಿ ವರ್ಣನೆಗಳನ್ನು ಓದಿದಾಗ ಅಂದಿನ ಮಹಿಳೆಯರು ಕೇಶಾಲಂಕಾರಕ್ಕಾಗಿ ಗಂಧ, ಚಂಪಕ, ಮಲ್ಲಿಗೆ, ದವನಗಳ ಎಣ್ಣೆಗಳನ್ನುಪಯೋಗಿಸುತ್ತಿದ್ದರೆಂಬುದು ಸ್ಪಷ್ಟವಾಗುತ್ತದೆ.

	ಚಾಳುಕ್ಯರ ರಾಜಧಾನಿಗಳಾದ ಐಹೊಳೆ ಪಟ್ಟದಕಲ್ಲುಗಳಲ್ಲಿಯ ದೇವಾಲಯಗಳು ಭಾರತದಲ್ಲಿಯೇ ಅತಿ ಪ್ರಾಚೀನ ದೇವಾಲಯಗಳಾಗಿವೆಯಷ್ಟೆ. ಪಟ್ಟದಕಲ್ಲಿನ ವಿರೂಪಾಕ್ಷ, ಮಲ್ಲಿಕಾರ್ಜುನ ದೇವಾಲಯಗಳಲ್ಲಿ ಅನೇಕ ವಿಗ್ರಹಗಳ ಜಡೆಮುಡಿಗಳು ಸುಂದರವಾಗಿವೆ. ಐಹೊಳೆಯ ದುರ್ಗಾ, ಲಾಡಖಾನ ಮೊದಲಾದ ದೇವಾಲಯಗಳ ಕೇಶಾಲಂಕಾರ ವೈವಿಧ್ಯಮಯವಾಗಿದೆ. ಅವುಗಳಲ್ಲಿ ಬಿಡುಮುಡಿ, ಸೋಗೆದುರುಂಬು, ಮುತ್ತಿನಮುಡಿ, ಎಳಲ್ಮುಡಿ, ಬಳಲ್ಮುಡಿ, ಗೋಡಂಬಿಮುಡಿಗಳು ಆ ಕಾಲದ ಕೇಶಾಲಂಕಾರಗಳನ್ನು ಎತ್ತಿತೋರುತ್ತವೆ. ಚಾಳುಕ್ಯ ವಿಕ್ರಮಾದಿತ್ಯನ ರಾಣಿಯರಾದ ಲೋಕಮಹಾದೇವಿ. ತ್ರೈಲೋಕ್ಯಮಹಾದೇವಿಯರು ಪಟ್ಟದಕಲ್ಲಿನಲ್ಲಿ ಕಟ್ಟಿಸಿದ ದೇವಾಲಯಗಳು ಲೋಕೇಶ್ವರ, ತ್ರೈಲೋಕೇಶ್ವರ ದೇವಾಲಯಗಳೆಂದು ಪ್ರಸಿದ್ಧವಾಗಿವೆಯಷ್ಟೇ.  ಈಗ ಆ ದೇವಾಲಯಗಳಿಗೆ ವಿರೂಪಾಕ್ಷ, ಮಲ್ಲಿಕಾರ್ಜುನ ದೇವಾಲಯಗಳೆನ್ನುವರು. ಶಿಲ್ಪಕಲೆಯ ಅಗರವಾಗಿರುವ ಆ ದೇವಾಲಯಗಳಲ್ಲಿ ಶಿಲಾಬಾಲಿಕೆಯರು ಕಟ್ಟಿದ ಬಿಡುಮುಡಿಯನ್ನು ಕಾಣಬಹುದು.

	1. ಪ್ರಾಚೀನ ಕೇಶಾಲಂಕಾರಗಳಲ್ಲಿನಂತೆ ಬಿಡುಮುಡಿ ಕಟ್ಟುವುದು ಕಠಿಣವೆನಿಸುವುದೇನೋ ನಿಜ; ಆದರೆ ಅದು ಕಲಾಪೂರ್ಣವಾಗಿದೆ. ಮೊದಲು ಒಂದು ಸಿಂಬಿ ಇಟ್ಟುದೊಡ್ಡ ಗಂಟನ್ನು ಕಟ್ಟಬೇಕು. ಉಳಿದರ್ದ ಕೂದಲನ್ನು ಓರಣವಾಗಿ ಬಾಚಿ ಅರ್ಧಚಂದ್ರಾಕಾರದ ಸಿಂಬಿಯನ್ನು ಒಳಗಿಟ್ಟು ಸುತ್ತಲೂ ಕೂದಲನ್ನು ಸುತ್ತಿ ಅದನ್ನು ಮುಡಿಯ ಕೆಳಭಾಗದಿಂದ ನೆಟ್ಟಗೆ ಮುಡಿಯವರೆಗೆ ಬರುವಂತೆ ಸುತ್ತಿ ಪಿನ್ನುಗಳನ್ನು ಹಾಕಿದರೆ ಬಿಡುಮುಡಿ ಸಿದ್ಧವಾಗುತ್ತದೆ.

	2. ಮುಡಿ ನವಿಲಂತೆ ನರ್ತಿಕುಂ ಎನ್ನುವಂತೆ ನವಿಲು ಗರಿಗೆದರಿ ಕುಣಿಯುತ್ತಿರುವಂತೆ ತೋರುವ ಸೋಗೆದುರುಂಬನ್ನು ಐಹೊಳೆಯ ದೇವಾಲಯಗಳಲ್ಲಿ ಕಾಣಬಹುದು. 
ನೆತ್ತಿಯ ಮೇಲಿನ ಕೂದಲುಗಳನ್ನು ಮಾತ್ರ ತೆಗೆದುಕೊಂಡು ಸಣ್ಣ ತುರುಬೊಂದನ್ನು ನೆತ್ತಿಯ ಮೇಲೆ ಕಟ್ಟಿ ಹಿಂಭಾಗದ ಕೂದಲನ್ನು ಚೆನ್ನಾಗಿ ಬಾಚಿ ಅನೇಕ ವಿಭಾಗಮಾಡಿ ನವಿಲುಗರೆಯಂತೆ ಒಂದರ ಮೇಲೊಂದು ಗರಿ ಬರುವ ಹಾಗೆ ತಲೆಯ ಸುತ್ತಲೂ ಕಟ್ಟಬೇಕು. ಈ ಸೋಗೆದುರುಬು ಮಹಿಳೆಯರ ಕೇಶಾಲಂಕಾರ ನಿಪುಣತೆಗೆ ಸಾಕ್ಷಿಯಾಗಿದೆ.

	3. ಆ ಕಾಲದ ಅರಮನೆಗಳಲ್ಲಿ ಮುತ್ತು ರಾಶಿರಾಶಿಯಾಗಿರುತ್ತಿತ್ತು. ಮಹಿಳೆಯರು ಮುಡಿಯ ಅಲಂಕಾರದ ಸಾಧನವಾಗಿ ಮುತ್ತಿನ ಎಳೆಗಳನ್ನುಪಯೋಗಿಸುತ್ತಿದ್ದರು. ಪಟ್ಟದಕಲ್ಲಿನ ತ್ರಿಲೋಕೇಶ್ವರ ದೇವಾಲಯದಲ್ಲಿರುವ ಶಿಲ್ಪಸುಂದರಿ ಮುತ್ತಿನ ಮುಡಿಯಿಂದಲಂಕೃತಳಾಗಿದ್ದಾಳೆ. ತಲೆಯ ಸುತ್ತಲೂ ಮೂರೆಳೆಯ ಮುತ್ತಿನ ಸರವನ್ನು ಅಂದವಾಗಿ ಸುತ್ತಲಾಗಿದೆ. ನೆತ್ತಿಯ ಮೇಲೆ ಮುತ್ತಿನ ಗೊನೆಯನ್ನಿಟ್ಟು ಎಲ್ಲ ಕೂದಲನ್ನೂ ತಲೆಯ ಎಡಭಾಗದಿಂದ ಮುರಿಗೆ ಮಾಡಿ ಮುತ್ತಿನ ಗೊನೆಯ ಸುತ್ತಲೂ ಎತ್ತಿ ಸುತ್ತಿದ್ದಾರೆ. ಆ ಮುಡಿ ಗಟ್ಟಿಯಾಗಿರಲು ಮುತ್ತಿನ ಎರಡೆಳೆಗಳನ್ನು ಕಲಾತ್ಮಕವಾಗಿ ಸುತ್ತ ಸುತ್ತಿದ್ದಾರೆ. ತೋರಮುಡಿಯೊಳೆ ಮುತ್ತಿನ ಶೃಂಗಾರವೊಪ್ಪಿತು-ಎಂಬಂತೆ ತೋರುವುದು ಮುತ್ತಿನ ಮುಡಿ.

	4. ಅದೇ ದೇವಾಲಯದಲ್ಲಿರುವ ಇನ್ನೋರ್ವ ಶಿಲ್ಪಸುಂದರಿ ತನ್ನ ದುಂಡಗಿನ ಮುಖಕ್ಕೊಪ್ಪುವಂತೆ ಗೋಡಂಬಿಮುಡಿ ಕಟ್ಟಿದ್ದಾಳೆ. ತಲೆಗೂದಲನ್ನೆಲ್ಲ ಬಾಚಿ, ಒಳಗೆ ಗೋಡಂಬಿಯಾಕಾರದ ಸಿಂಬಿಯನ್ನಿಟ್ಟು ಅದರ ಸುತ್ತಲೂ ಕೂದಲನ್ನು ಸುತ್ತಿ ತಲೆಯ ಮೇಲ್ಭಾಗದಲ್ಲಿ ಎದ್ದುಕಾಣುವಂತೆ ಕಟ್ಟಿದ ಈ ಮುಡಿಗೆ ಆಭರಣಗಳ ಅವಶ್ಯಕತೆಯಿಲ್ಲ. ನಾರಿಗೆ ಮುಡಿಯೇ ಶೃಂಗಾರವಾಗಿದೆ.

	5. ಪಟ್ಟದಕಲ್ಲಿನ ಪಾಪನಾಥ ದೇವಾಲಯದ ಶಿಲಾಬಾಲಿಕೆಯರಲ್ಲಿ ಕಂಡುಬರುವ  ಮುಡಿಗಳಲ್ಲಿ ಎಳಲ್ಮುಡಿ ಸುಂದರವಾಗಿದೆ. ಅರ್ಧಚಂದ್ರಾಕೃತಿಯ ಸಿಂಬಿಗೆ ಕೂದಲನ್ನು ಸುತ್ತಿ ತಲೆಯ ಮೇಲ್ಭಾಗದಲ್ಲಿ ಎದ್ದುಕಾಣುವಂತೆ ಕಟ್ಟಿದ ಮುಡಿಯ ಮಧ್ಯದಲ್ಲೊಂದು ಹರಳು ಹಂಗಿಸಿದ ಕೇಶಾಭರಣವಿದೆ. ಹಳೇಬೀಡು ಬೇಲೂರು ಶಿಲಾಬಾಲಿಕೆಯರ ಮುಡಿಗಳು, ಅಜಂತ ಚಿತ್ರಗಳ ಮುಡಿಗಳಂತೆ ಪ್ರಸಿದ್ಧವಾಗಿವೆ. ಈ ಮುಡಿಗಳು ತಲೆಗಿಂತಲೂ ಎತ್ತರವಾಗಿ ಕಟ್ಟಲ್ಪಟ್ಟಿವೆ. ಒಂದು ಸುತ್ತು ಜಡೆಯನ್ನು ಚಕ್ರಾಕಾರವಾಗಿ ಸುತ್ತಿದ್ದಾರೆ. ಅದರಸುತ್ತಲೂ ಮಲ್ಲಿಗೆಮಾಲೆ, ಅದರ ಮೇಲೆ ಕೂದಲನ್ನು ದುಂಡಗೆ ಸುತ್ತಿದ್ದಾರೆ. ಮತ್ತೊಂದು ಜಡೆಯನ್ನು ಅದರ ಸುತ್ತಲೂ ಸುತ್ತಲಾಗಿದೆ. ಬೀಸಣೆಕೆಯ ಆಕಾರದಲ್ಲಿ ಜಡೆಮುಡಿ ಅಂದವಾಗಿ ತೋರುತ್ತದೆ. ಜಡೆಗೆ ಕಟ್ಟಿದ ಜರದ ಗೊಂಡೆಗಳು ಹಿಂಭಾಗದಲ್ಲಿ ನರ್ತಿಸುತ್ತಿವೆ. ಈ ಮುಡಿಗೆ ಸಿರಿಮುಡಿ, ಜಡೆಮುಡಿ, ಇಲ್ಲವೆ ಬೇಲೂರಮುಡಿ, ಬೀಸಣಿಕೆಮುಡಿ ಎನ್ನಬಹುದು. ವಿಜಯನಗರದ ಅರಸರ ಕಾಲದ ಶಿಲ್ಪಸುಂದರಿಯರ ಮುಡಿಗಳೆಲ್ಲ ಬಂಬಲ್ಮುಡಿ ಅಥವಾ ತೆಕ್ಕೆದುರುಂಬುಗಳಾಗಿವೆ. ಬಂಬಲ್ಮುಡಿ ಎಂದರೆ ದೊಡ್ಡಮುಡಿ; ತೆಕ್ಕೆದುರುಬೂ ಅದೇ ಅರ್ಥವುಳ್ಳದ್ದು. ದೊಡ್ಡ ಅಳತೆಯ ಗಂಗಾವನವನ್ನು (ಬನ್) ಕೂದಲಿನ ಮಧ್ಯದಲ್ಲಿಟ್ಟು ದೊಡ್ಡ ಮುಡಿಯನ್ನು ಕಟ್ಟಿದ್ದಾರೆ. ಆ ಕಾಲದ ಶಿಲ್ಪಗಳಲ್ಲಿ ಈ ಮುಡಿಯೊಂದೇ ಎದ್ದುತೋರುವುದು. ವಿಜಯನಗರದಲ್ಲಷ್ಟೇ ಅಲ್ಲ ಆ ಅರಸರು ಕಟ್ಟಿಸಿದ ದೇವಾಲಯಗಳಲ್ಲೆಲ್ಲ ಬಂಬಲ್ಮುಡಿಯೇ ಕಂಡುಬರುತ್ತದೆ.

	ಆಧುನಿಕ ಕಾಲದ ಕೇಶಾಲಂಕಾರ ದಿನಕ್ಕೊಂದು ಬಗೆಯಾಗಿ ಮಾರ್ಪಡುತ್ತಿದೆ. ಇಂದಿನ ಮಹಿಳೆಯರು ಕೇಶಾಲಂಕಾರಕ್ಕೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ. ಶಿಲಾಬಾಲಿಕೆಯರ ಜಡೆಮುಡಿಗಳು ಚಲನಚಿತ್ರ ಜಗತ್ತಿಗೆ ಪ್ರವೇಶಿಸಿ ಆ ಮೂಲಕ ಎಲ್ಲೆಡೆ ಪ್ರಸಾರವಾಗುತ್ತಿವೆ. ಮಹಿಳೆಯರ ಸೌಂದರ್ಯಾಭಿವೃದ್ಧಿಗೆ ಕೇಶಾಲಂಕಾರ ಒಂದು ಮಹತ್ವದ ಸಾಧನವಾಗಿದೆ.
ಮುಖದ ಆಕೃತಿಗೆ, ದೇಹದ ಗಾತ್ರಕ್ಕೆ, ಎತ್ತರಕ್ಕೆ ತಕ್ಕಂತೆ ಮುಡಿ ಕಟ್ಟುವ ಕಲೆ ಬೆಳೆದುಬರುತ್ತಿದೆ. ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಕುಶಲ ಕೇಶಾಲಂಕಾರ ಕಲೆಯಲ್ಲಿ ನಿಪುಣೆಯರಾದವರು ಮುಡಿಕಟ್ಟುವ ಉದ್ಯೋಗ ಕೈಗೊಂಡಿದ್ದಾರೆ. ಅಂಥವರು ಮುಡಿಕಟ್ಟಲು ವಿದ್ಯುತ್ ಸಲಕರಣೆಗಳನ್ನೂ ಬಳಸುತ್ತಾರೆ. ಅವರು ಪರಿಶ್ರಮಪಟ್ಟು ಕಟ್ಟುವ ಮುಡಿಗಳನ್ನು ನೋಡುವುದೆಂದರೆ ಕಣ್ಣಿಗೊಂದು ಹಬ್ಬ.
ಪಟ್ಟದಕಲ್ಲು, ಅಜಂತ, ಬೇಲೂರು ಮುಡಿಗಳ ಅನುಕರಣೆ ಚಿತ್ರಪ್ರಪಂಚದಲ್ಲಿ ಪ್ರಾರಂಭವಾಗಿ ಆಧುನಿಕ ಮಹಿಳೆಯರ ಕೇಶಾಲಂಕಾರಕ್ಕೆ ಮಾರ್ಗದರ್ಶಕವಾಗಿದೆ. ಇಂದಿನ ಮಹಿಳೆಯರು ಪೇಟೆಯಲ್ಲಿ ದೊರೆಯುವ ಗಂಗಾವನ, ಸಿಂಬಿಗಳನ್ನು ಬಳಸುತ್ತಾರೆ. ಅವು ಚಕ್ರಾಕಾರ, ಅರ್ಧಚಂದ್ರಾಕಾರ ಹಾಗೂ ದೊಡ್ಡಮುಡಿಗಳ ಆಕಾರದಲ್ಲಿ ದೊರೆಯುತ್ತವೆ. ಅಂಥ ಸಿಂಬಿಗಳನ್ನು ಉಪಯೋಗಿಸಿ ಚಿತ್ತಾಕರ್ಷಕವಾಗಿ, ವೈವಿಧ್ಯಪೂರ್ಣವಾಗಿ ನಾನಾರೀತಿಯಾಗಿ ಮುಡಿಗಳನ್ನು ಕಟ್ಟುತ್ತಾರೆ. ದುಂಡಗಿನ ಮುಖಕ್ಕೆ ತಲೆಗಿಂತ ಎತ್ತರವಾಗಿ ಕಾಣುವ ಮುಡಿ ಒಪ್ಪುತ್ತದೆ. ತಲೆಯ ಹಿಂಭಾಗದಲ್ಲಿ ಅರ್ಧಚಂದ್ರಾಕಾರದ ಗಂಗಾವನ ಹಾಕಿ ಆ ಭಾಗದ ಕೂದಲನ್ನು ಏರಿಸಿ ಬಾಚಬೇಕು. ಮುಂದೆ ನಡು ಬೈತಲೆ ಇರಬೇಕು. ನೆತ್ತಿಯ ಹಿಂಭಾಗದ ಕೂದಲನ್ನು ಕೂಡಿಸಿ ಅಲ್ಲೊಂದು ದೊಡ್ಡ ಗಂಗಾವನ ಹಾಕಿ ಮುಡಿ ಕಟ್ಟಿದರೆ ದುಂಡಗಿನ ಮುಖದ ಅಂದ ಹೆಚ್ಚುವುದು. ಅಂಡಾಕೃತಿ ಮುಖವುಳ್ಳವರು ಚಕ್ರಾಕಾರದ ದೊಡ್ಡ ಅಳತೆಯ ಗಂಗಾವನ ಹಾಕಿ ಬಂಬಲ್ಮುಡಿಯಂತೆ ಕಾಣುವ ಮುಡಿಯನ್ನು ಕಟ್ಟಿದರೆ ಒಪ್ಪುತ್ತದೆ. ಎತ್ತರ ಹೆಚ್ಚಾಗಿರುವವರು ಉದ್ದವಾಗಿರುವ ಗಂಗಾವನ ಹಾಕಿ ಎಡಭಾಗದಿಂದ ಆ ಗಂಗಾವನಕ್ಕೆ ಕೂದಲುಗಳನ್ನು ಸುತ್ತಿ ಮುಡಿ ತಲೆಯ ಕೆಳಭಾಗದಲ್ಲಿ ಬರುವಂತೆ ಅಂದರೆ ಬಳಲ್ಮುಡಿಯಂತೆ ಕಟ್ಟಿದರೆ ಅವರ ನಿಲುವು ಹೆಚ್ಚು ಎತ್ತರವಾಗಿ ಕಾಣುವುದಿಲ್ಲ. ಚೌಕೋನಾಕೃತಿಯ ಮುಖವುಳ್ಳವರು ಸಮವಾಗಿ ಬಾಚಿಕೊಂಡು ಮುಡಿ ಅಗಲವಾಗಿ ಕಾಣುವಂತೆ ಗಂಗಾವನ ಹಾಕಿ ಅರ್ಧಕೂದಲಿನಿಂದ ದುಂಡಗಿನ ಮುಡಿ ಕಟ್ಟಬೇಕು. ಉಳಿದರ್ಧ ಕೂದಲನ್ನು ಜಡೆ ಹೆಣೆದು ಆ ಮುಡಿಯ ಸುತ್ತಲೂ ಸುತ್ತಬೇಕು. ಮೇಲೊಂದು ಅರೆಬಿರಿದ ಮಲ್ಲಿಗೆಮಾಲೆ ಹಾಕಿದರೆ ಜಡೆಮುಡಿಯ ಅಂದ ಹೆಚ್ಚುವುದು. ಇತ್ತೀಚೆಗೆ ಮುಖದ ಗಾತ್ರಕ್ಕಿಂತ ದೊಡ್ಡದಾದ ಮುಡಿಯನ್ನು ತಲೆಗಿಂತ ಎತ್ತರವಾಗಿ ಕಾಣುವಂತೆ ಕಟ್ಟುವರು. ತರುಣಿಯರು ಎರಡು ಜಡೆ ಹೆಣೆದುಕೊಳ್ಳುವರು. ಇಲ್ಲವೆ ಬಾಬ್‍ಕಟ್ ಮಾಡಿಸಿಕೊಂಡು ನಡುಬೈತಲೆ ತೆಗೆಯುವರು. ಪೋನೀಟೇಲ್ ಕಟ್ಟುವುದೂ ವಾಡಿಕೆಯಾಗಿದೆ.

	ಜಡೆ ಕಟ್ಟುವುದು ಒಂದು ವಿಶಿಷ್ಟ ಕಲೆ. ಬೈತಲೆ ನಡುವಿಗೆ ತೆಗೆಯುವವರಿದ್ದಾರೆ. ಎಡಕ್ಕೋ, ಬಲಕ್ಕೋ ತೆಗೆಯುವವರಿದ್ದಾರೆ. ಸ್ವಲ್ಪವೇ ನಡುಬೈತಲೆ ತೆಗೆದು ಕೂದಲನ್ನೆಲ್ಲ ಹಿಂದಕ್ಕೆ ಬಾಚುವವರಿದ್ದಾರೆ. ಕೆಲವರು ಹಾಗೆಯೇ ಎಲ್ಲ ತಲೆಗೂದಲನ್ನು ಬೈತಲೆ ತೆಗೆಯದೆ ಹಿಂದಕ್ಕೆ ಬಾಚುತ್ತಾರೆ. ಜಡೆ ಒಂದೇ ಆದಾಗ ಮೂರು ಕಾಲಿನದಾಗಬಹುದು, ಐದು ಕಾಲಿನದಾಗಬಹುದು. ಎರಡು ಜಡೆ ಹಾಕುವುದು ಬಾಲ್ಯ ಯೌವನಗಳಲ್ಲಿ ಸಹಜ. ಜಡೆ ಬಿಗಿಯಾಗಿರಬಹುದು, ಸಡಿಲವಾಗಿರಬಹುದು. ಎರಡು ಜಡೆಗಳ ತುದಿಗಳನ್ನೂ ಎತ್ತಿ ಜಡೆ ಮೂಲಗಳಲ್ಲಿ ಗಂಟುಕಟ್ಟುವ ವಾಡಿಕೆಯೂ ಇದೆ. ನೀಳವಾದ ಜಡೆಯ ತುದಿಯಲ್ಲೆರಡು ಗೊಂಡೆ ಕಟ್ಟಿದರೆ ಒಂದು ಬಗೆಯ ಅಲಂಕರಣವಾದರೆ ಜಡೆಯನ್ನು ಅರ್ಧವೇ ಹೆಣೆದು ಅದರ ಮೂಲದಲ್ಲಿ ಒಂದು ಉಣ್ಣೆಯ ದಪ್ಪದಾರ ಬಿಗಿದರೆ ಮತ್ತೊಂದು ಅಲಂಕರಣವಾಗುತ್ತದೆ. ನಿತಂಬದವರೆಗೂ ನೀಳವಾಗಿ ಬಳಕುತ್ತಿರುವ ಜಡೆ ಎಲ್ಲ ಶೃಂಗಾರಪ್ರಿಯರ ಆದರ್ಶವೆನ್ನಿಸಿದೆ. ಬೇಕೆಂದವರು ಮಲ್ಲಿಗೆ ಮೊಗ್ಗನ್ನು ಹೆಣೆದು ನಾಗರ ಜಡೆ ಕಟ್ಟುತ್ತಾರೆ. ಕೇದಗೆ ಹೂವಿನ ಜಡೆ ಹಾಕುವವರಿದ್ದಾರೆ.

	ಉಟ್ಟ ಸೀರೆಯ ಬಣ್ಣ, ಮುಡಿದ ಹೂವಿನ ಬಣ್ಣ ಒಂದೇ ಆಗಿರುವಂತೆ ಬಣ್ಣದ ಹೊಂದಾಣಿಕೆಯನ್ನು ಸಾಧಿಸುವ ಪ್ರಯತ್ನ ನಡೆದಿದೆ. ಮೊದಲಿನ ಕಾಲದಲ್ಲಿ ಬಣ್ಣ ಬಣ್ಣದ ಹೂಮಾಲೆಯನ್ನು ಮುಡಿಯ ಸುತ್ತಲೂ ಕಟ್ಟಿಕೊಳ್ಳುವುದು ಅಲಂಕಾರವೆನಿಸಿತ್ತು. ಈಗ ಹೂಮಾಲೆಗಿಂತ ಬಿಡಿಹೂವನ್ನು ಮುಡಿದುಕೊಳ್ಳುವರು. ಅದು ಜಡೆಯೆ ನಡುವಿಗೆ ಇರಬಹುದು; ಇಲ್ಲವೆ ಕಿವಿಯ ಬಳಿ ಕರ್ಣಪೂರವಾಗಿರಬಹುದು.

	ಕೇಶಾಲಂಕರಣಕ್ಕೆ ತೈಲ, ಪುಷ್ಪಗಳಂತೆ ಹಲಕೆಲವು ಆಭರಣಗಳ ಅಗತ್ಯವೂ ಇದೆ. ನೆತ್ತಿಯಲ್ಲಿ ಹಾಕುವ ನಾಗರ, ಜಡೆಯ ಮೇಲರ್ಧದ ಮೇಲಕ್ಕೆ ಧರಿಸುವ ಜಡೆಯಲ್ಲೆ, ತುರುಬಿನ ನಡುವೆ, ಓರೆಯಲ್ಲಿ ಧರಿಸುವ ತುರುಬು ಹೂ, ಜಡೆಯ ತುದಿಯಲ್ಲಿ ತೊನೆದಾಡುವಂತೆ ಕಟ್ಟುವ ಗೊಂಡೆ ಇವು ಕೆಲವು ಪ್ರಸಿದ್ಧ ಆಭರಣಗಳು. ಇವುಗಳ ಮಾಟ ಮಾದರಿಗಳು ಕಾಲಕಾಲಕ್ಕೆ ವ್ಯತ್ಯಾಸವಾಗುತ್ತ ಬಂದಿವೆ. ನಾಗರ ತನ್ನ ಪ್ರಾಮುಖ್ಯವನ್ನು ಕಳೆದುಕೊಳ್ಳುತ್ತಿದ್ದರೂ ಉಳಿದ ಆಭರಣಗಳು ಕೆಲವು ಮಾರ್ಪಾಟಿನೊಂದಿಗೆ ನಡೆದುಬರುತ್ತಿವೆ.                            
	     
  (ಎಸ್.ಎಚ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ